ತುಮಕೂರು


ಕಾಂಗ್ರೆಸ್ ದೇಶವನ್ನು ಪಾಕಿಸ್ತಾನ, ಬಾಂಗ್ಲ ಎಂದು ದೇಶವನ್ನು ವಿಭಜಿಸಿ ಕೋಟ್ಯಾಂತರ ಜನರ ಹತ್ಯಾಕಾಂಡದ ನೆತ್ತರನ್ನು ಹರಿಸಿ, ಇದೀಗ ಭಾರತ್ ಜೋಡೋ ಯಾತ್ರೆ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ಬಿಜೆಪಿ ಜಿಲ್ಲಾ ಘಟಕ ಪ್ರಧಾನ ಕಾರ್ಯದರ್ಶಿ ಹೆಚ್.ಟಿ.ಭೈರಪ್ಪ ತೀವ್ರವಾಗಿ ಲೇವಡಿ ಮಾಡಿ ವಂಗ್ಯವಾಡಿದ್ದಾರೆ.
ಇವರು ನಗರದ ಬಿಜೆಎಸ್ ವೃತ್ತದಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕವು ಕಾಂಗ್ರೆಸ್‍ನ ಭಾರತ್ ಜೋಡೋ ಯಾತ್ರೆ ವಿರುದ್ಧ ನಡೆಸಿದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ನೆಹರು ನೇತೃತ್ವದ ಕಾಂಗ್ರೆಸ್ ದೇಶವನ್ನು ಒಡೆದರು. ನಂತರ ಇಂದಿರಾಗಾಂಧಿ ಕರಾಳ ತುರ್ತುಪರಿಸ್ಥಿತಿ ಹೇರಿ, ದೇಶ ಭಕ್ತರನ್ನು ಸೆರೆವಾಸ ಅನುಭವಿಸುವಂತೆ ಮಾಡಿದರು. ಸುಮಾರು 60 ವರ್ಷಗಳ ಕಾಲ ದೇಶವನ್ನು ಆಳಿದ ಕಾಂಗ್ರೆಸ್ ಜನಪರ ಯೋಜನೆ-ಅಭಿವೃದ್ಧಿ ಹೆಸರಿನಲ್ಲಿ ಲಕ್ಷಾಂತರ ಕೋಟಿ ರೂಗಳ ಹಣ ಲೂಟಿ ಮಾಡಿದ್ದಾರೆ ಎಂದರಲ್ಲದೆ, ದೇಶದ ಅಲ್ಪಸಂಖ್ಯಾತರ ತುಷ್ಟಿಕರಣಕ್ಕೆ ಸಹಕರಿಸಿ ದೇಶದಲ್ಲಿ ನೆಮ್ಮದಿ-ಶಾಂತಿ-ಅಸೂಯೆ-ಮತ್ಸರ-ಸಮಾಜ ದ್ರೋಹಿ ಚಟುವಟಿಕೆ ಮಾಡುವವರಿಗೆ ಪ್ರೋತ್ಸಾಹಿಸುತ್ತಾ ದೇಶದ ಏಕತೆ-ಅಖಂಡತೆ-ಸಮಗ್ರತೆಗೆ ಧಕ್ಕೆ ತರುವವರಿಗೆ ಪ್ರೋತ್ಸಾಹಿಸುತ್ತಿದ್ದಾರೆ ಎಂದರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಟ ನಡೆಸಿದ ಕಾಂಗ್ರೆಸ್‍ನ್ನು ರಾಷ್ಟ್ರಪಿತ ಮಹಾತ್ಮಗಾಂಧಿಜೀರವರ ಸಲಹೆಯಂತೆ ವಿಸರ್ಜಿಸದೆ ತಮ್ಮ ಸ್ವಾರ್ಥಕ್ಕಾಗಿ ಜವಹರಲಾಲ್ ನೆಹರು ಕಾಂಗ್ರೆಸ್ ಹೆಸರನ್ನು ಮುಂದಿಟ್ಟುಕೊಂಡು ತಮ್ಮ ಕುಟುಂಬದ ವಂಶಪಾರಪರ್ಯ ಆಡಳಿತಕ್ಕೆ ದುರಾಲೋಚನೆ ಮಾಡಿ ಕಾಂಗ್ರೆಸ್ ಹೆಸರಿನಿಂದ ಮತ ಪಡೆದು, ದೇಶದ ಜನರ ಕಷ್ಟ ಮತ್ತು ಅವರ ನಾಡಿ ಮಿಡಿತ ಅರ್ಥಮಾಡಿಕೊಳ್ಳದೇ ಲೂಟಿಮಾಡುತ್ತಾ ಹಗರಣದಲ್ಲಿ ಮುಳುಗಿ, ದೇಶದ ಅರ್ಥವ್ಯವಸ್ಥೆಯನ್ನು ಸಂಕಷ್ಟಕ್ಕೆ ದೂಡಿ ದೇಶದ ಬೆಳವಣಿಗೆಗೆ ಹಿನ್ನಡೆ ಮಾಡಿದವರಾಗಿರುತ್ತಾರೆ. ಕಾಂಗ್ರೆಸ್‍ನ ಬಹುತೇಕ ನಾಯಕರುಗಳು ವಿವಿಧ ಭ್ರಷ್ಟಾಚಾರದ ಆರೋಪಗಳನ್ನೊತ್ತು ಇಂದು ಕೋರ್ಟ್ ಬೇಲ್ ಮೇಲೆ ಇದ್ದು, ವಿಚಾರಣೆ ನಂತರ ಅವರುಗಳ ಸೆರೆವಾಸ ಶೀಘ್ರವಾಗಿ ಅಗಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿ, ಇನ್ನಾರು ತಿಂಗಳಲ್ಲಿ ಕಾಂಗ್ರೆಸ್ ಮುಕ್ತವಾಗಲಿದೆ ಎಂದರು.
ಕಳೆದ 8 ವರ್ಷಗಳ ಮೋದಿ ಆಡಳಿತ ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತಿರುವುದರಿಂದ ಅಸೂಯೆಯಿಂದ ಕಾಂಗ್ರೆಸ್ ನಮಗೆ ಮುಂದಿನ ದಿನಮಾನದಲ್ಲಿ ಭವಿಷ್ಯವಿಲ್ಲವೆಂದು ಕಾಂಗ್ರಸ್ ಕಾರ್ಯಕರ್ತರನ್ನು ಒಗ್ಗೂಡಿಸಲು ಭಾರತ್ ಜೋಡೋ ಯಾತ್ರೆ ಮಾಡುತ್ತಿದೆ. ಇದೊಂದು ನಾಟಕೀಯ ಯಾತ್ರೆ ಎಂದು ವ್ಯಂಗವಾಡಿದರು. ಕೇಂದ್ರ ಮತ್ತು ರಾಜ್ಯ ಬಿಜೆಪಿ ನೇತೃತ್ವದ ಡಬ್ಬಲ್ ಇಂಜಿನ್ ಸರ್ಕಾರಗಳು ಜನಪರ-ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಜನರ ವಿಶ್ವಾಸ ಗಳಿಸಿದೆ ಎಂದು ಹೆಚ್.ಟಿ.ಭೈರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಪ್ರತಿಭಟನಾ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್, ಜಿಲ್ಲಾ ವಕ್ತಾರ ಕೆ.ಪಿ.ಮಹೇಶ, ಮಾಧ್ಯಮ ಜಿಲ್ಲಾ ಪ್ರಮುಖ್ ಟಿ.ಆರ್.ಸದಾಶಿವಯ್ಯ, ಸಾಮಾಜಿಕ ಜಾಲತಾಣ ಪ್ರಕೋಷ್ಠದ ಜಿಲ್ಲಾ ಸಹಸಂಚಾಲಕಿ ಶಕುಂತಲ ನಟರಾಜ್, ಸದಸ್ಯ ಮಂಜುನಾಥ್ ಗುಬ್ಬಿ ಹೊಸಹಳ್ಳಿ, ರೈತ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಶೈಲಶ್ರೀ.ಟಿ, ಎಸ್.ಟಿ. ಮೋರ್ಚಾ ಜಿಲ್ಲಾಧ್ಯಕ್ಷ ಜಿ.ಕೆ.ಬಸವರಾಜು, ಉಪಾಧ್ಯಕ್ಷೆ ರತ್ನಮ್ಮ, ತುಮಕೂರು ನಗರ ಮಂಡಲ ಅಧ್ಯಕ್ಷ ಹನುಮಂತರಾಜು.ಹೆಚ್.ಟಿ, ಪ್ರಧಾನ ಕಾರ್ಯದರ್ಶಿ ರಾಜೀವ್ ಕೃಷ್ಣಮೂರ್ತಿ, ಜಿಲ್ಲಾ ವಕ್ರ್ಫ್ ಬೋರ್ಡ್ ಉಪಾಧ್ಯಕ್ಷ ಶಬೀರ್ ಆಹಮ್ಮದ್, ಒಬಿಸಿ ಮೋರ್ಚಾ ನಗರ ಕಾರ್ಯದರ್ಶಿ ಅನಿಲ್ ಕುಮಾರ್, ಎಸ್.ಟಿ.ಮೋರ್ಚಾ ನಗರ ಅಧ್ಯಕ್ಷ ಬೊಂಬು ಮೋಹನ್, ತುಮಕೂರು ನಗರ ರೈತ ಮೋರ್ಚಾ ಅಧ್ಯಕ್ಷ ಹಾಗೂ ಟೂಡಾ ಸದಸ್ಯ ಜಗದೀಶ್, ತುಮಕೂರು ನಗರ ಯುವಮೋರ್ಚಾ ಅಧ್ಯಕ್ಷ ನಾಗೇಂದ್ರ, ಪ್ರಧಾನ ಕಾರ್ಯದರ್ಶಿಗಳಾದ ಭರತ್, ಶಿವದೇವ್, ಕಾರ್ಯದರ್ಶಿ, ಉಮೇಶ್, ರಘು, ತುಮಕೂರು ಗ್ರಾಮಾಂತರ ಯುವ ಮೋರ್ಚಾ ಅಧ್ಯಕ್ಷ ಮಧನ್ ಹಿರೇಹಳ್ಳಿ, ತುಮಕೂರು ನಗರ ಎಸ್.ಸಿ. ಮೋರ್ಚಾ ಉಪಾಧ್ಯಕ್ಷ ಸಿದ್ಧಗಂಗಯ್ಯ ಮುಂತಾದ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

(Visited 1 times, 1 visits today)