ತುಮಕೂರು


ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಸಂಬಂಧಿಸಿದಂತೆ ಸರಕಾರದ ನಿರ್ಲಕ್ಷ ಧೋರಣೆ ಕುರಿತು ಚರ್ಚೆ ನಡೆಸುವ ಸಲುವಾಗಿ ದಲಿತ ಸಂಘರ್ಷ ಸಮಿತಿ ಮುಖಂಡರ ಸಭೆಯಲ್ಲಿ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿತ್ತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ದಸಂಸ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ, ದಲಿತ ಸಮುದಾಯದಲ್ಲಿಯೇ ಸಾಮಾಜಿಕ ನ್ಯಾಯ ಪರಿಪಾಲನೆ ದೃಷ್ಟಿಯಿಂದ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡುವಂತೆ ಕಳೆದ 12 ವರ್ಷಗಳಿಂದ ಅಧಿಕಾರ ನಡೆಸಿದ ಎಲ್ಲಾ ರಾಜಕೀಯ ಪಕ್ಷಗಳ ವರದಿಯನ್ನು ನಿರ್ಲಕ್ಷ ಮಾಡುತ್ತಾ ಬಂದಿವೆ.ಚುನಾವಣೆ ಸಂದರ್ಭದಲ್ಲಿ ಮಾದಿಗ ಸಮುದಾಯದ ಮತ ಪಡೆಯುವ ಉದ್ದೇಶದಿಂದ ರಾಜಕೀಯ ಪಕ್ಷಗಳು ಒಳಮೀಸಲಾತಿ ಜಾರಿ ಕುರಿತಂತೆ ಮಾತುಕತೆ ನಡೆಸುವ ನಾಟಕ ಮಾಡುತ್ತವೆ.ಚುನಾವಣೆ ಮುಗಿದ ನಂತರ ಇಲ್ಲಸಲ್ಲದ ಕಾರಣ ಹೇಳಿ ಕನಿಷ್ಠ ಸದನದಲ್ಲಿ ಚರ್ಚೆ ನಡೆಸಲು ಹಿಂದೇಟು ಹಾಕುತ್ತಿವೆ ಎಂದು ಆರೋಪಿಸಿದರು.
ಕಳೆದ ತಿಂಗಳು ನಡೆದ ವಿಧಾನಸಭಾ ಅಧಿವೇಶದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಹೆಚ್ಚಳ,ಕಾಡುಗೊಲ್ಲ ಸೇರಿದಂತೆ ಕೆಲ ಜಾತಿಗಳನ್ನು ಪರಿಶಿಷ್ಟ ಪಂಗಡದ ಜಾತಿ ಪಟ್ಟಿಗೆ ಸೇರ್ಪಡೆ, ಪರಿಶಿಷ್ಟ ಜಾತಿ ಪಟ್ಟಿಗೆ ಬೇಡ ಜಂಗಮ ಸೇರಿಸುವ ಕುರಿಂತೆ ಸಾಕಷ್ಟು ಚರ್ಚೆಗಳು ನಡೆದವು.ಆದರೆ ಬಹುಸಂಖ್ಯಾತ ಮಾದಿಗ ಸಂಬಂಧಿತ ಜಾತಿಗಳ ಒಳಮೀಸಲಾತಿಯ ಬಗ್ಗೆ ಚರ್ಚೆ ನಡೆಯಲಿಲ್ಲ.ರಾಜ್ಯದ ಎಲ್ಲಾ ಶಾಸಕರಿಗೂ ಸದನದಲ್ಲಿ ಒಳಮೀಸಲಾತಿ ವಿಚಾರವಾಗಿ ಚರ್ಚೆ ನಡೆಸುವಂತೆ ಮನವಿ ಮಾಡಿದ್ದರೂ ಯಾವೊಬ್ಬ ಶಾಸಕರು ನಮ್ಮ ಮನವಿಯನ್ನು ಪುರಸ್ಕರಿಸಿಲ್ಲದಿರುವುದು ತುಂಬಾ ನೋವಿನ ಸಂಗತಿ ಎಂದರು.
ಪರಿಶಿಷ್ಟ ಜಾತಿಯಲ್ಲಿರುವ ಮಾದಿಗ ಜನಾಂಗ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಮುಂದೆ ಬರಬಾರದೆಂಬ ಉದ್ದೇಶದಿಂದ ಸದನದಲ್ಲಿ ಈ ವಿಚಾರವನ್ನು ಚರ್ಚಿಸಲು ಎಲ್ಲಾ ಶಾಸಕರು, ಅದರಲ್ಲಿಯೂ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಶಾಸಕ ವಿರುದ್ದ ಹಾಗೂ ಆಡಳಿತ ಪಕ್ಷದ ವಿರುದ್ದ ಮಾದಿಗ ಸಮುದಾಯ ಮತ ಚಲಾಯಿಸುವ ಮೂಲಕ ತಕ್ಕ ಪಾಠ ಕಲಿಸಬೇಕೆಂದು ಪಿ.ಎನ್.ರಾಮಯ್ಯ ಕರೆ ನೀಡಿದರು.
ಕಳೆದ 250ಕ್ಕೂ ಹೆಚ್ಚು ದಿನಗಳಿಂದ ವಾಲ್ಮೀಕಿ ಸಮುದಾಯದ ಶ್ರೀಪ್ರಸನ್ನಾನಂದಸ್ವಾಮೀಜಿಗಳು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳ ಮಾಡಬೇಕೆಂದು ಆಗ್ರಹಿಸಿ,ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ಅಹೋರಾತ್ರಿ ಧರಣಿ ಹಮ್ಮಿಕೊಂಡಿದ್ದರು.ಇವರಿಗೆ ಬೆಂಬಲ ವ್ಯಕ್ತಪಡಿಸಿ,ಎಲ್ಲಾ ವರ್ಗದ ದಲಿತರು, ಹಲವು ಹಂತದ ಹೋರಾಟಗಳನ್ನು ನಡೆಸಿದ್ದರ ಫಲವಾಗಿ,ಸರಕಾರ ಇಂದು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಶೇ24ರ ಮಿಸಲಾತಿ ಹೆಚ್ಚಳ ಆದೇಶ ಹೊರಡಿಸಿದೆ.ಸರಕಾರದ ಈ ನಡೆಯನ್ನು ದಸಂಸ ಸ್ವಾಗತಿಸುತ್ತದೆ.ಇದೇ ರೀತಿಯಲ್ಲಿ ಒಳಮೀಸಲಾತಿ ವರ್ಗೀಕರಣಕ್ಕೂ ಸರಕಾರ ಕ್ರಮ ಕೈಗೊಳ್ಳಬೇಕೆಂಬದು ನಮ್ಮ ಆಗ್ರಹವಾಗಿದೆ ಎಂದು ಪಿ.ಎನ್.ರಾಮಯ್ಯ ತಿಳಿಸಿದರು.
ಅಂಬೇಡ್ಕರ್ ದಂಡು ಸಂಘಟನೆಯ ಜಿಲ್ಲಾಧ್ಯಕ್ಷ ಕುಮಾರ್ ಮಾತನಾಡಿ,ಜಿಲ್ಲೆಯ,ನಗರ,ಗ್ರಾಮಾಂತರ ಪ್ರದೇಶದದ ಜನರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸುವಂತೆ ಕರೆ ನೀಡಿದರು.
ಸಭೆಯಲ್ಲಿ ದಲಿತ ಸೇನೆ ರಾಜ್ಯ ಕಾರ್ಯದರ್ಶಿ ಕೆಂಪರಾಜು, ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಗಣೇಶ್, ದಸಂಸ ಜಿಲ್ಲಾ ಸಂಚಾಲಕ ಕೇಬಲ್ ರಘು, ಡಿಎಸ್‍ಎಸ್ ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ಟಿ.ಎನ್.ಮಧು, ಮಾದಿಗ ದಂಡೋರದ ಜಿಲ್ಲಾಧ್ಯಕ್ಷ ಆಟೋ ಶಿವರಾಜು, ತಾಲೂಕು ಯುವ ಘಟಕದ ಅಧ್ಯಕ್ಷ ಲಕ್ಷ್ಮಿನಾರಾಯಣ ಮತ್ತಿತರರು ಉಪಸ್ಥಿತರಿದ್ದರು.

(Visited 1 times, 1 visits today)