ತುಮಕೂರು :
ತಮಗೆ ಲಭಿಸಿದ ಖಚಿತ ವರ್ತಮಾನ ಆಧರಿಸಿ ಗೋಡೋನ್ ಒಂದರ ಮೇಲೆ ದಾಳಿ ನಡೆಸಿದ ತುಮಕೂರು ಮಹಾನಗರ ಪಾಲಿಕೆಯ ಅಧಿಕಾರಿಗಳು, ಸುಮಾರು 1 ಲಕ್ಷ ರೂ. ಮೌಲ್ಯದ 1,200 ಕೆ.ಜಿ. ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರಲ್ಲದೆ, ಸಂಬಂಧಿಸಿದವರಿಗೆ 50,000 ರೂ. ದಂಡ ವಿಧಿಸಿರುವ ಮಹತ್ವದ ಘಟನೆ ಶುಕ್ರವಾರ ನಡೆದಿದೆ.
ತುಮಕೂರು ನಗರದ ಮಂಡಿಪೇಟೆಯ ಒಂದನೇ ಮುಖ್ಯರಸ್ತೆಯ ಮೂರನೇ ತಿರುವಿನಲ್ಲಿರುವ ಗೋಡೋನ್‍ನಲ್ಲಿ ಈ ಘಟನೆ ಜರುಗಿದೆ. ಇದು ಅಮ್ಜದ್ ಪಾಷ ಎಂಬುವವರಿಗೆ ಸೇರಿದ ಗೋಡೋನ್ ಆಗಿದೆ.
ದೊಡ್ಡ ಪ್ರಮಾಣದಲ್ಲಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸಿಡಲಾಗಿದೆ ಎಂಬ ವರ್ತಮಾನದ ಹಿನ್ನೆಲೆಯಲ್ಲಿ ಗುರುವಾರ ಸಂಜೆಯೇ ಪಾಲಿಕೆಯ ಅಧಿಕಾರಿಗಳು ಈ ಗೋಡೋನ್‍ಗೆ ದಾಳಿ ನಡೆಸಿದ್ದರು. ಆದರೆ ಗೋಡೋನ್ ಮಾಲೀಕರು ಬಾಗಿಲು ತೆರೆಯಲು ಒಪ್ಪಿರಲಿಲ್ಲ. ಹೀಗಾಗಿ ಸದರಿ ಗೋಡೋನ್ ಅನ್ನು ಪಾಲಿಕೆಯವರು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು.
ಶುಕ್ರವಾರ ಮಧ್ಯಾಹ್ನ ಆಯುಕ್ತ ಟಿ.ಭೂಬಾಲನ್ ಅವರ ನೇತೃತ್ವದಲ್ಲಿ ಪಾಲಿಕೆಯ ಆರೋಗ್ಯಾಧಿಕಾರಿ ಡಾ. ನಾಗೇಶ್‍ಕುಮಾರ್, ಪರಿಸರ ಇಂಜಿನಿಯರ್ಗಳಾದ ಮೃತ್ಯುಂಜಯ, ಮೋಹನ್‍ಕುಮಾರ್, ಕೃಷ್ಣಮೂರ್ತಿ, ಹೆಲ್ತ್ ಇನ್ಸ್‍ಪೆಕ್ಟರ್ಗಳಾದ ಚಿಕ್ಕಸ್ವಾಮಿ, ರುದ್ರೇಶ್, ಆನಂದ್, ಮಂಜುಳ ಮತ್ತು ಸಿಬ್ಬಂದಿಯವರು ಗೋಡೋನ್ ತೆರೆದು ನೋಡಿದಾಗ, ಅಲ್ಲಿ ಸರಿಸುಮಾರು ಒಂದು ಲಕ್ಷ ರೂ. ಮೌಲ್ಯದ 1,200 ಕೆ.ಜಿ. ಯಷ್ಟು ನಿಷೇಧಿತ ಪ್ಲಾಸ್ಟಿಕ್ ವಸ್ತುಗಳು ಇದ್ದುದು ಪತ್ತೆಯಾಗಿದೆ. ನಿಷೇಧಿತ ಪ್ಲಾಸ್ಟಿಕ್ ಲೋಟ, ಕವರ್, ಹಾಳೆಗಳು, ಥರ್ಮೊಕೋಲ್ ಮೊದಲಾದವು ಇದರಲ್ಲಿ ಸೇರಿವೆ.
ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸಿಟ್ಟಿರುವ ಕಾರಣಕ್ಕಾಗಿ ಅಮ್ಜದ್‍ಪಾಷ ಅವರಿಗೆ ಪಾಲಿಕೆಯ ಆಯುಕ್ತರು 50,000 ರೂ. ದಂಡವನ್ನು ವಿಧಿಸಿದ್ದಾರೆಂದು ಪಾಲಿಕೆಯ ಮೂಲಗಳು ತಿಳಿಸಿವೆ.
ದೊಡ್ಡಪ್ರಮಾಣದಲ್ಲಿ ವಶಪಡಿಸಿಕೊಳ್ಳಲಾದ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಪಾಲಿಕೆಯವರು ವಾಹನಗಳಲ್ಲಿ ತುಂಬಿಸಿ, ಅದನ್ನು ಅಜ್ಜಗೊಂಡನಹಳ್ಳಿಯ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸಿದರು.