ತುಮಕೂರು:
ಸಂಚಾರಿ ಪೊಲೀಸ್ ಠಾಣೆಯೂ ಸೇರಿದಂತೆ ಜಿಲ್ಲೆಯಲ್ಲಿರುವ 41 ಪೊಲೀಸ್ ಠಾಣೆಗಳಲ್ಲಿ ಈಗಾಗಲೇ ಹೊಸ ವಾಹನ ವಿತರಣೆ ಮಾಡಿರುವ ಠಾಣೆ ಹೊರತುಪಡಿಸಿ ಉಳಿಕೆ ಠಾಣಾಧಿಕಾರಿಗಳಿಗೆ 15-20 ವರ್ಷಗಳಷ್ಟು ಹಳೆಯ ವಾಹನಗಳನ್ನು ಪರಿಶೀಲಿಸಿ ಹೊಸ ವಾಹನ ಮಂಜೂರು ಮಾಡಿ ಪೊಲೀಸರ ಕರ್ತವ್ಯ ನಿಷ್ಠೆಯನ್ನು ಮತ್ತಷ್ಟು ಹೆಚ್ಚಿಸುವತ್ತ ಕ್ರಮ ಕೈಗೊಳ್ಳಬೇಕೆಂದು ಹ್ಯೂಮನ್ ರೈಟ್ಸ್ ಪ್ರೊಟೆಸ್ಟ್ ಸೆಂಟ್ರಲ್ (ರಿ.) ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಹ್ಯೂಮನ್ ರೈಟ್ಸ್ ಪ್ರೊಟೆಸ್ಟ್ ಸೆಂಟ್ರಲ್‍ನ ರಾಜ್ಯಾಧ್ಯಕ್ಷ ಎಸ್.ಸಾಧಿಕ್ ಪಾಷ ನೇತೃತ್ವದಲ್ಲಿ ನಿಯೋಗದಲ್ಲಿ ತೆರಳಿದ ಸಂಸ್ಥೆಯ ಪದಾಧಿಕಾರಿಗಳು ಜಿಲ್ಲಾ ಪೊಲೀಸ್ ಕಚೇರಿಯ ಡಿವೈಎಸ್ಪಿ ಸೂರ್ಯನಾರಾಯಣ್ ರಾವ್ ರವರ ಮೂಲಕ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹ್ಯೂಮನ್ ರೈಟ್ಸ್ ಪ್ರೊಟೆಸ್ಟ್ ಸೆಂಟ್ರಲ್‍ನ ರಾಜ್ಯಾಧ್ಯಕ್ಷ ಎಸ್.ಸಾಧಿಕ್ ಪಾಷ ರಾಜ್ಯದಲ್ಲಿ ಪೊಲೀಸ್ ಅಧಿಕಾರಿ ಮತ್ತು ಪೊಲೀಸ್ ಸಿಬ್ಬಂದಿಗಳಿಗೆ ಗುಣಮಟ್ಟದ ವಾಹನಗಳ ಕೊರತೆ, ಸಿಬ್ಬಂದಿ ಕೊರತೆ, ನಿಗಧಿತ ಸಮಯವಿಲ್ಲ, ಸರಿಯಾದ ವೈಜ್ಞಾನಿಕ ತರಬೇತಿಇಲ್ಲ, ಸುಸಜ್ಜಿತ ವಸತಿ ಗೃಹಗಳು, ಮೂಲಭೂತ ಸೌಕರ್ಯಗಳಿಲ್ಲ, ಆರೋಗ್ಯ ತಪಾಸಣೆ ಇಲ್ಲ, ಸೇವೆ ಮಾಡಿಸಿಕೊಳ್ಳುವ ನೆಪದಲ್ಲಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ರಕ್ಷಣೆ, ಸುರಕ್ಷತೆ ಮರೀಚಿಕೆಯಾಗಿದೆ ಆದ್ದರಿಂದ ಪೊಲೀಸ್ ಸಿಬ್ಬಂದಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಂತೆ ಮನವಿ ಮಾಡಿದರು.
ಇಂದು ಪೊಲೀಸ್ ಇಲಾಖೆಯ ವಾಹನಗಳ ಸ್ಥಿತಿ ಶೋಚನೀಯವಾಗಿದೆ. ಕರ್ತವ್ಯಕ್ಕೆ ಯೋಗ್ಯವಾಗಿಲ್ಲ, ಪೊಲೀಸರು ಹಗಲು-ರಾತ್ರಿ ವಿಶ್ರಾಂತಿ ಇಲ್ಲದೆ ಕರ್ತವ್ಯ ನಿರ್ವಹಿಸುತ್ತಾರೆ. ತನಿಖೆ- ಅಪರಾಧಿಗಳ ಮೇಲೆ ದಾಳಿಗಳಂತಹ ನಿಯೋಜನೆಗಳು, ಅವರ ದೈಹಿಕ, ಮಾನಸಿಕ, ಸಾವು ನೋವುಗಳು ಇಡೀ ಇಲಾಖೆಯನ್ನು ಭಯದ ಭೀತಿಯಲ್ಲಿ ಇರಿಸಿದೆ. ಅವರಿಗೂ ಹೆಂಡತಿ ಮಕ್ಕಳ ಭವಿಷ್ಯ ಇದೆ ಎನ್ನುವ ಬಗ್ಗೆ ಪೊಲೀಸ್ ಇಲಾಖೆಯ ಒಳಾಡಳಿತ ಇಲಾಖೆ ಇಂದು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಜಿಲ್ಲೆಯ 41 ಪೊಲೀಸ್ ಠಾಣೆಗಳಲ್ಲಿ ಈಗಾಗಲೇ ಹೊಸ ವಾಹನ ವಿತರಣೆ ಮಾಡಿರುವ ಠಾಣೆಗಳನ್ನು ಹೊರತು ಪಡಿಸಿ ಉಳಿಕೆ ಠಾಣಾಧಿಕಾರಿಗಳಿಗೆ ಕಳೆದ 15-20 ವರ್ಷಗಳಷ್ಟು ಹಳೆಯ ವಾಹನಗಳನ್ನು ನೀಡಿದ್ದು, ಇವು ಚಾಲನೆಯಾಗದೆ ದುರಸ್ಥಿ ಮಾಡಿದರೂ ಸುಸ್ಥಿತಿಯಲ್ಲಿರದೆ ನಿಷ್ಪ್ರಯೋಜಕವಾಗಿರುವ ಬಗ್ಗೆ ಪರಿಶೀಲಿಸಿ ತುರ್ತಾಗಿ ಹೊಸ ವಾಹನ ಮಂಜೂರು ಮಾಡಿಕೊಟ್ಟು ಪೊಲೀಸರ ಕರ್ತವ್ಯವನ್ನು ಹೆಚ್ಚಿಸಬೇಕೆಂದು ಮನವಿ ಮಾಡಿದರು.
ನಿಯೋಗದಲ್ಲಿ ಹ್ಯೂಮನ್ ರೈಟ್ಸ್ ಪ್ರೊಟೆಸ್ಟ್ ಸೆಂಟ್ರಲ್‍ನ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂಡಿ. ದಸ್ತಗೀರ್, ಮುದಾಸೀರ್, ಜಾಕಿರ್, ಮೆಹಬೂಬ್, ವಾಸಿಂ, ಸಂತೋಷ್, ಹುಸೇನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.