ತುಮಕೂರು :

      ನಗರದ ಪಶ್ಚಿಮ ವಿಭಾಗದ ಸಂಚಾರಿ ಪಿಎಸ್‍ಐ ಜ್ಞಾನಮೂರ್ತಿ ರವರು ತಮ್ಮ ಕೆಲವು ಸಿಬ್ಬಂದಿಗಳೊಟ್ಟಿಗೆ ಸೇರಿಕೊಂಡು ಭ್ರಷ್ಟಾಚಾರಕ್ಕಿಳಿದಿದ್ದಾರೆ.

      ದಿನಾಂಕ 23-07-2019 ರ ಮಂಗಳವಾರ ಸಂಜೆ ಸರಿಸುಮಾರು 7.30 ರ ಸುಮಾರಿನಲ್ಲಿ ಕೆಎ-51 ಎಎ 9651 ಟಾಟಾ ಕಂಪನಿಯ ಲಗೇಜು ಸಾಗಿಸುವ ವಾಹನವನ್ನು ನಗರದ ಬಿಹೆಚ್ ರಸ್ತೆಯ ಟ್ರೆಂಡ್ಸ್ ಮುಂಭಾಗದಿಂದ ತೆಗೆದುಕೊಂಡು ಹೋಗಿರುತ್ತಾರೆ. ಸ್ವತಃ ಪಶ್ಚಿಮ ವಿಭಾಗದ ಪಿಎಸ್‍ಐ ಜ್ಞಾನಮೂರ್ತಿರವರೇ ವಾಹನವನ್ನು ತಮ್ಮ ಠಾಣಾ ವ್ಯಾಪ್ತಿಗೆ ತೆಗೆದುಕೊಂಡು ಹೋಗಿ ನಿಲ್ಲಿಸಿಕೊಂಡಿರುತ್ತಾರೆ. ವಾಹನದ ಮಾಲೀಕರು ಮತ್ತು ಚಾಲಕರು ವಾಹನ ಬಿಡುವಂತೆ ಬೇಡಿದರೂ ಬಿಡದೇ ಅದರಲ್ಲಿದ್ದ ಸಾಮಾನು ಮತ್ತು ಸರಂಜಾಮುಗಳ ಸಮೇತ ತಮ್ಮ ವಶಕ್ಕೆ ಪಡೆದು ಹಣಕ್ಕಾಗಿ ಬೇಡಿಕೆಯಿಟ್ಟು ಮಾಲೀಕರು ಮತ್ತು ಚಾಲಕರನ್ನು ಬೆದರಿಸಿರುತ್ತಾರೆಂದು ತಿಳಿದುಬಂದಿರುತ್ತದೆ. ದಿನಾಂಕ 23-07-2019 ರ ರಾತ್ರಿ 7.30 ರಿಂದ 24-07-2019 ರ ಸಂಜೆ 4.30 ರವರೆಗೆ ಅನಧಿಕೃತವಾಗಿ ತಮ್ಮ ವಶದಲ್ಲೇ ಇಟ್ಟುಕೊಂಡು ಹಣಕ್ಕಾಗಿ ಒತ್ತಾಯ ಮಾಡಿ 4000 ರೂ. ಲಂಚದ ಹಣ ಪಡೆದು ವಾಹನವನ್ನು ಬಿಟ್ಟುಕಳುಹಿಸಿರುತ್ತಾರೆಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಕೇವಲ ಹಣಕ್ಕಾಗಿ, ಹಣದ ವ್ಯಾಮೋಹಕ್ಕಾಗಿ ರಿಲಯನ್ಸ್ ಅಂಗಡಿ ಮಳಿಗೆಯ ಮುಂಭಾಗದಲ್ಲಿ ಸರಕು ಇಳಿಸುತ್ತಿದ್ದ ವಾಹನವನ್ನು ತಂದು ಹಣ ವಸೂಲಿ ಮಾಡಿ ಬಿಟ್ಟಿದ್ದಾರೆ ಎಂದು ಇಡೀ ಪೊಲೀಸ್ ಇಲಾಖೆಯಾದ್ಯಂತ ಬಿಸಿಬಿಸಿ ಚರ್ಚೆಯಾಗುತ್ತಿದೆ.

      ಪಿಎಸ್‍ಐ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಇದೊಂದು ತಾಜಾ ಉದಾಹರಣೆಯಾಗಿದೆ ಎಂದು ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗಿದೆ. ತುಮಕೂರು ನಗರ ಹೊರವಲಯದಲ್ಲಿರುವ ರಿಂಗ್ ರಸ್ತೆ ಅಥವಾ ಹೈವೇ ರಸ್ತೆಗಳಿಗೆ ಯಾವುದೇ ಸಂಚಾರಿ ಪಿಎಸ್‍ಐ ಅಥವಾ ಸಿಬ್ಬಂಧಿಗಳು ಹೋಗಿ ಯಾವುದೇ ವಾಹನಗಳನ್ನು ತಡೆದು ಹಣ ವಸೂಲಿ ಮಾಡಬಾರದೆಂದು ಈ ಹಿಂದಿನ ಎಸ್ಪಿಯವರಾದ ಡಾ||ದಿವ್ಯ ಗೋಪಿನಾಥ್‍ರವರು ಖಡಕ್ ಎಚ್ಚರಿಕೆ ನೀಡಿದ್ದರು.

      ಅದರಂತೆಯೇ ಯಾವುದೇ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂಧಿಗಳು ಹೈವೇ ರಸ್ತೆಗಳಲ್ಲಿ ಹಣ ವಸೂಲಿ ಮಾಡಬಾರದೆಂದು ಹಾಲಿ ಪೊಲೀಸ್ ವರಿಷ್ಠಾಧಿಕಾರಿಗಳು ಮೌಖಿಕ ಎಚ್ಚರಿಕೆ ನೀಡಿದ್ದರೂ ಸಹಾ ಪ್ರತಿದಿನ  ಜ್ಞಾನಮೂರ್ತಿರವರು ತನಗೆ ಬೇಕಾದ ಕೆಲವು ಆಪ್ತ ಸಿಬ್ಬಂಧಿಗಳನ್ನು ಕರೆದುಕೊಂಡು ಹೋಗಿ ಹೈವೇಗಳಲ್ಲಿ ರೈತರ ಟ್ರಾಕ್ಟರ್‍ಗಳು ಮತ್ತು ಟಿಪ್ಪರ್ ಲಾರಿಗಳನ್ನು ಹಿಡಿದು ಹಣ ವಸೂಲಿ ಮಾಡುತ್ತಿದ್ದಾರೆಂಬ ಆರೋಪವಿದೆ.

      ಟ್ರಾಕ್ಟರ್ ಗಳು ಮತ್ತು ಟಿಪ್ಪರ್ ಲಾರಿಗಳನ್ನು ಹೊರತುಪಡಿಸಿ ಬೇರೆ ಯಾವುದೇ ವಾಹನಗಳನ್ನ ತಪಾಸಣೆ ಮಾಡುವುದಿಲ್ಲ, ಕೇಸುಗಳನ್ನು ಹಾಕುವುದಿಲ್ಲ ಇದು ಮತ್ತೊಂದು ಸಂಶಯಕ್ಕೆಡೆಮಾಡಿಕೊಡುತ್ತದೆ. ಸಾರ್ವಜನಿಕವಾಗಿ ಭ್ರಷ್ಟಾಚಾರ ಮಾಡುತ್ತಿದ್ದಾರೆ. ಬಡ ರೈತರಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆಪಾದನೆಯಲ್ಲಿ ಮಿಂದೆದಿದ್ದಾರೆ. ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮೌಖಿಕ ಆದೇಶವನ್ನೇ ಉಲ್ಲಂಘಿಸಿ ಈ ರೀತಿ ಭ್ರಷ್ಟಾಚಾರಕ್ಕಿಳಿದಿರುವುದು ಅಥವಾ ಹಣ ವಸೂಲಿಗಿಳಿದಿರುವುದು ಎಷ್ಟರಮಟ್ಟಿಗೆ ಸರಿ ಎನ್ನುವುದು ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ದಕ್ಷ ಮತ್ತು ಪ್ರಾಮಾಣಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಿರುವ ಡಾ||ಕೋನ ವಂಶಿ ಕೃಷ್ಣರವರು ಸಂಚಾರಿ ಪಿಎಸ್‍ಐ ಮತ್ತು ಸಂಚಾರಿ ಪೋಲೀಸರ ಭ್ರಷ್ಟಾಚಾರದ ಬಗ್ಗೆ ಕೂಡಲೇ ಗಮನಹರಿಸಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

(Visited 29 times, 1 visits today)