ತುಮಕೂರು:
ಕರ್ನಾಟಕ ರತ್ನ, ಪದ್ಮಭೂಷಣ, ತ್ರಿವಿಧ ದಾಸೋಹಿ, ಬಸವ ಪ್ರಶಸ್ತಿ ಪುರಸ್ಕøತರಾದ ಲಿಂಗೈಕ್ಯ ಡಾ: ಶ್ರೀಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಪುಣ್ಯ ಸ್ಮರಣೆ ಸಮಾರಂಭವನ್ನು ಜನವರಿ 31ರ ಬೆಳಿಗ್ಗೆ 10.30 ಗಂಟೆಗೆ ಶ್ರೀ ಸಿದ್ಧಗಂಗಾ ಕ್ಷೇತ್ರದಲ್ಲಿ ನಡೆಸಲಾಗುವುದು ಎಂದು ಸಿದ್ಧಗಂಗಾ ಮಠದ ಶ್ರೀಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ತಿಳಿಸಿದರು.
ಮಠದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜನವರಿ 21ರಂದು ಪ್ರಾತಃಕಾಲ 11.44 ಸಮಯದಲ್ಲಿ ಲಿಂಗೈಕ್ಯರಾದ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ಪುಣ್ಯಸ್ಮರಣೆ ಸಮಾರಂಭವನ್ನು 11ನೇ ದಿನವಾದ ಜ.31ರಂದು ಮಠದ ಆವರಣದಲ್ಲಿರುವ ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸುತ್ತೂರು ವೀರ ಸಿಂಹಾಸನ ಮಹಾ ಸಂಸ್ಥಾನ ಮಠದ ಪರಮ ಪೂಜ್ಯ ಜಗದ್ಗುರು ಶ್ರೀಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು ವಹಿಸಲಿದ್ದಾರೆ. ಸಿರಿಗೆರೆಯ ತರಳಬಾಳು ಸಂಸ್ಥಾನ ಮಠದ ಪರಮ ಪೂಜ್ಯ ಜಗದ್ಗುರು ಡಾ: ಶ್ರೀಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮಿಗಳು, ಬೆಂಗಳೂರು ಆರ್ಟ್ ಆಫ್ ಲಿವಿಂಗ್‍ನ ಪೂಜ್ಯ ಶ್ರೀ ರವಿಶಂಕರ್ ಗುರೂಜಿ ಹಾಗೂ ಕನಕಪುರ ದೇಗುಲ ಮಠದ ಪೂಜ್ಯ ಶ್ರೀ ಮುಮ್ಮಡಿ ನಿರ್ವಾಣಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಪುಣ್ಯ ಸ್ಮರಣೆ ಸಮಾರಂಭ ಜರುಗಲಿದೆ.
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕೇಂದ್ರ ರಕ್ಷಣಾ ಸಚಿವೆ ನಿರ್ಮಲ ಸೀತಾರಾಮ್, ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ.ಪರಮೇಶ್ವರ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಿದ್ದರಾಮಯ್ಯ ಹಾಗೂ ಎಂ.ವೀರಪ್ಪ ಮೊಯ್ಲಿ, ಗೃಹ ಸಚಿವ ಎಂ.ಬಿ.ಪಾಟೀಲ್, ಬೃಹತ್ ಮತ್ತು ಮಧ್ಯಮ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್, ವಿಧಾನಸಭಾ ಸದಸ್ಯ ವಿ.ಸೋಮಣ್ಣ ಅವರು ನುಡಿ ನಮನ ಸಲ್ಲಿಸಲಿದ್ದಾರೆ.
ಲೋಕಸಭಾ ಸದಸ್ಯ ಕೆ.ಹೆಚ್.ಮುನಿಯಪ್ಪ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಬಿ.ಜಡ್. ಜಮೀರ್ ಅಹ್ಮದ್ ಖಾನ್, ವಿಧಾನಸಭಾ ಸದಸ್ಯರಾದ ಬಸವರಾಜ ಹೊರಟ್ಟಿ ಹಾಗೂ ಶಾಮನೂರು ಶಿವಶಂಕರಪ್ಪ, ಕಾರ್ಮಿಕ ಸಚಿವ ವೆಂಕಟರಮಣಪ್ಪ, ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್, ಸಂಸದ ಮುದ್ದಹನುಮೇಗೌಡ, ಜಿಲ್ಲೆಯ ಶಾಸಕರಾದ ಜೆ.ಸಿ. ಮಾಧುಸ್ವಾಮಿ, ಜಿ.ಬಿ.ಜ್ಯೋತಿಗಣೇಶ್, ಬಿ.ಸಿ.ಗೌರಿಶಂಕರ್, ಬಿ.ಸತ್ಯನಾರಾಯಣ, ಎಂ.ವಿ.ವೀರಭದ್ರಯ್ಯ, ಬಿ.ಸಿ.ನಾಗೇಶ್, ಎ.ಎಸ್.ಜಯರಾಮ್, ಡಾ: ಹೆಚ್.ಡಿ.ರಂಗನಾಥ್, ವಿಧಾನ ಪರಿಷತ್ ಸದಸ್ಯರಾದ ಡಾ: ವೈ.ಎ.ನಾರಾಯಣ ಸ್ವಾಮಿ, ಕಾಂತರಾಜ್ ಹಾಗೂ ಆರ್.ಚೌಡರೆಡ್ಡಿ ತೂಪಲ್ಲಿ, ಜಿ.ಪಂ. ಅಧ್ಯಕ್ಷೆ ಲತಾ ರವಿಕುಮಾರ್, ಬೆಂಗಳೂರು ಮಹಾನಗರಪಾಲಿಕೆ ಮಹಾ ಪೌರರಾದ ಗಂಗಾಂಬಿಕೆ ಮಲ್ಲಿಕಾರ್ಜುನ್ ವಿಶೇಷ ಆಹ್ವಾನಿತರಾಗಿ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಶ್ರೀಗಳ ಪುಣ್ಯ ಸ್ಮರಣೆಗೆ ಕಾಲಾವಕಾಶ ಕಡಿಮೆಯಿದ್ದು, ಎಷ್ಟೇ ಭಕ್ತರು ಬಂದರೂ ಸಹ ಸೂಕ್ತ ವ್ಯವಸ್ಥೆ ಮಾಡಲಾಗುವುದು. ಪ್ರತಿನಿತ್ಯ ಬೆಳಿಗಿನಿಂದ ಸಂಜೆಯವರೆಗೆ ಗದ್ದುಗೆಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ವಿವಿಧ ಕಡೆ ಭೇಟಿ ನೀಡಿ ಗದ್ದುಗೆಯನ್ನು ವಿನ್ಯಾಸ ಮಾಡುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ತಿಳಿಸಿದರು.
ಪರಮ ಪೂಜ್ಯರ ಆಶೀರ್ವಾದ ಹಾಗೂ ಭಕ್ತಾಧಿಗಳ ಸಹಕಾರದಲ್ಲಿ ಮಠದ ನಿರ್ವಹಣೆಗೆ ಯಾವುದೇ ತೊಂದರೆಯಿಲ್ಲ. ಮಠದಲ್ಲಿ ಅಪೂರ್ಣಗೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವ ಕಡೆ ಪ್ರಥಮಾದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಶ್ಯಾಮನೂರು ಶಿವಶಂಕರಪ್ಪರವರು ಶಿವಕುಮಾರ ಸ್ವಾಮೀಜಿಯವರ ಕಂಚಿನ ಪುತ್ಥಳಿಯನ್ನು ಮಠಕ್ಕೆ ನೀಡಿದ್ದು ಅದನ್ನು ವಸ್ತು ಪ್ರದರ್ಶನ ಮುಂಭಾಗದಲ್ಲಿರುವ ಉದ್ಯಾನವನದಲ್ಲಿ ಪ್ರತಿಷ್ಠಾಪಿಸಲಾಗುವುದು ಎಂದು ತಿಳಿಸಿದಲ್ಲದೆ ಮುಂದಿನ ದಿನಗಳಲ್ಲಿ ಶ್ರೀಗಳು ಉಪಯೋಗಿಸುತ್ತಿದ್ದ ಪ್ರತಿಯೊಂದು ವಸ್ತುವನ್ನು ಸಹ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಸಿದ್ಧಗಂಗಾ ಮಠದಲ್ಲಿ ಎಂದಿನಂತೆ ಯಾವುದೇ ಪೂಜಾ ಕೈಂಕರ್ಯಗಳು ನಿಲ್ಲುವುದಿಲ್ಲ. ಜಾತ್ರಾ ಮಹೋತ್ಸವ, ವಸ್ತು ಪ್ರದರ್ಶನ, ಜಾನುವಾರು ಜಾತ್ರೆ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳು ನಿಗಧಿತ ಸಮಯದಲ್ಲಿ ನಡೆಯುತ್ತವೆ ಎಂದು ತಿಳಿಸಿದರು.
ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ಶ್ರೀಗಳ ಅಂತಿಮ ದರ್ಶನ, ಅಂತ್ಯಕ್ರಿಯೆ, ಮತ್ತಿತರ ಎಲ್ಲಾ ಕಾರ್ಯಗಳನ್ನು ಸುಸೂತ್ರವಾಗಿ ನಡೆಸಲು ಹಗಲಿರುಳು ಶ್ರಮಿಸಿದ ರಾಜ್ಯ ಸರ್ಕಾರ, ಜಿಲ್ಲಾಡಳಿತ, ಪೊಲೀಸ್ ಇಲಾಖೆಗಳಿಗೆ ಕೃತಜ್ಞತೆ ಸಲ್ಲಿಸಿದರಲ್ಲದೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಿ ಶ್ರೀಗಳ ದರ್ಶನಕ್ಕೆ ಅನುವು ಮಾಡಿಕೊಟ್ಟ ರೈಲ್ವೆ ಇಲಾಖೆ ಹಾಗೂ ಸಾರಿಗೆ ಇಲಾಖೆಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಶ್ರೀಗಳಿಗೆ ಉತ್ತಮ ಚಿಕಿತ್ಸೆ ನೀಡುವಲ್ಲಿ ಶ್ರಮಿಸಿದ ಚೆನ್ನೈನ ರೇಲಾ ಆಸ್ಪತ್ರೆ, ಬೆಂಗಳೂರಿನ ಬಿಜಿಎಸ್ ಆಸ್ಪತ್ರೆ, ಸ್ಥಳೀಯ ಸಿದ್ಧಗಂಗಾ ಅಸ್ಪತ್ರೆಯ ವೈದ್ಯರ ತಂಡದ ಕಾರ್ಯವನ್ನು ಶ್ಲಾಘಿಸಿದರು.