ತುಮಕೂರು:

      ತುಮಕೂರು ವಿವಿ ಡಿಜಿಟಲ್ ಗ್ರಂಥಾಲಯವನ್ನು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಿದರು.

      “ಇಂದಿನ ಯುಗ ಡಿಜಿಟಲ್ ಯುಗ. ಈ ಡಿಜಿಟಲ್ ಯುಗದಲ್ಲಿ ಮಾಹಿತಿ ಸಂಪನ್ಮೂಲಗಳನ್ನು ಕ್ಷಿಪ್ರವಾಗಿ ತಲುಪಿಸಲು ಡಿಜಿಟಲ್ ರೂಪದಲ್ಲಿ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ತುಮಕೂರು ವಿವಿಯು ರೂಸಾ ಯೋಜನೆಯಡಿ ಡಿಜಿಟಲ್ ಗ್ರಂಥಾಲಯವನ್ನು ಸ್ಥಾಪಿಸಿ, ಪ್ರತಿಯೊಬ್ಬರಿಗೂ ತಾವಿರುವಲ್ಲಿಯೇ ಗ್ರಂಥಾಲಯವನ್ನು ಕೊಂಡೊಯ್ಯುವಲ್ಲಿ ಮಹತ್ತರ ಹೆಜ್ಜೆಯನ್ನಿಟ್ಟಿದೆ.” ಎಂದು ತುಮಕೂರು ವಿವಿ ಕುಲಪತಿ ಪ್ರೊ. ಸಿದ್ದೇಗೌಡ ಹೇಳಿದರು.

      ತುಮಕೂರು ವಿವಿಯು ರೂಸಾ ಯೋಜನೆಯಡಿ ನವೀಕರಿಸಿರುವ ಗ್ರಂಥಾಲಯ ಮಾಹಿತಿ ವಿಜ್ಞಾನ ವಿಭಾಗದ ಗಣಕಯಂತ್ರ ಪ್ರಯೋಗಾಲಯ ಮತ್ತು ವಿವಿ ಡಿಜಿಟಲ್ ಗ್ರಂಥಾಲಯವನ್ನು ಮೈಸೂರು ರಾಜವಂಶಸ್ಥ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ. ಟಿ.ಡಿ.ಕೆಂಪರಾಜು ಉದ್ಘಾಟಿಸಿದರು.

      ರಾಷ್ಟ್ರೀಯ ಉಚ್ಚತರ ಶಿಕ್ಷಾ ಅಭಿಯಾನ (ರೂಸಾ) ಯೋಜನೆಯಲ್ಲಿ ದೇಶದ ವಿವಿಧ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಿಗೆ ಸರಿಸಮನಾಗಿ ತುಮಕೂರು ವಿವಿ ತನ್ನನ್ನು ಗುರುತಿಸಿಕೊಂಡು ಇಪ್ಪತ್ತು ಕೋಟಿ ಅನುದಾನವನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಈ ಅನುದಾನದಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಗಣಕಯಂತ್ರ ಪ್ರಯೋಗಾಲಯ ಹಾಗೂ ಡಿಜಿಟಲ್ ಗ್ರಂಥಾಲಯವನ್ನು ಸ್ಥಾಪಿಸಲಾಗಿದೆ.

      ಇದೇ ಸಂದರ್ಭದಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ವಿಶೇಷ ಉಪನ್ಯಾಸ ಮಾಲೆಯನ್ನು ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ. ಟಿ.ಡಿ. ಕೆಂಪರಾಜು ಉದ್ಘಾಟಿಸಿ, “ಗ್ರಂಥಾಲಯಗಳಲ್ಲಿ ಪರಿವರ್ತನೆ” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.

      ಉದ್ಘಾಟನೆಗೆ ಆಗಮಿಸಿದ ಗಣ್ಯರುಗಳನ್ನು ಪೂರ್ಣಕುಂಭ ಸ್ವಾಗತದ ಮೂಲಕ ಬರಮಾಡಿಕೊಂಡಿದ್ದು ಗಮನ ಸೆಳೆಯಿತು. ವಿಭಾಗದ ಮುಖ್ಯಸ್ಥ, ವಿವಿ ಪ್ರಭಾರ ಗ್ರಂಥಪಾಲಕ ಪ್ರೊ. ಬಿ.ಟಿ. ಸಂಪತ್ ಕುಮಾರ್, ಉಪಗ್ರಂಥಪಾಲಕ ಡಾ. ರವಿವೆಂಕಟ್, ವಿಭಾಗದ ಬೋಧಕರು, ಗ್ರಂಥಾಲಯ ಸಿಬ್ಬಂದಿ, ವಿವಿಧ ಶಿಕ್ಷಣಸಂಸ್ಥೆಗಳ ಗ್ರಂಥಪಾಲಕರು, ಸಂಶೋಧನಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

 

(Visited 30 times, 1 visits today)