ತುಮಕೂರು :
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ರಥ ಸಪ್ತಮಿ ಅಂಗವಾಗಿ ಬೃಹತ್ ಸಾಮೂಹಿಕ ಸೂರ್ಯ ನಮಸ್ಕಾರ ನಡೆಸಲಾಯಿತು.
ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಬೆಳಿಗ್ಗೆ 5.15 ರಿಂದ 7.15ರ ವರೆಗೆ ಸೂರ್ಯ ಹುಟ್ಟಿದ ರಥಸಪ್ತಮಿ ದಿನವಾದ ಇಂದು ಸಾಮೂಹಿಕವಾಗಿ ನಡೆದ 108 ಸೂರ್ಯ ನಮಸ್ಕಾರದ ದೃಶ್ಯ ಮನಮೋಹಕವಾಗಿತ್ತು.
ನಂತರ ಮಾತನಾಡಿದ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಜಿಲ್ಲಾ ಸಂಚಾಲಕ ಚನ್ನಬಸಪ್ಪ, ಸೂರ್ಯ ಹುಟ್ಟಿದ ರಥಸಪ್ತಮಿ ದಿನವಾದ ಇಂದು ಉತ್ತಮ ಆರೋಗ್ಯ ಹಾಗೂ ಉತ್ತಮ ಪರಿಸರಕ್ಕಾಗಿ ಯಾವುದೇ ಲಿಂಗ ಭೇದ, ವರ್ಗ ಭೇದ ಇಲ್ಲದೆ ಯೋಗದ ಮೂಲಕ ಸೂರ್ಯ ನಮಸ್ಕಾರ ನಡೆಸಲಾಗಿದೆ ಎಂದರು.
ಸೂರ್ಯ ನಮಸ್ಕಾರ ಮಾಡುವ ಮೂಲಕ ಸಮಾಜದ ಎಲ್ಲರಿಗೂ ಉತ್ತಮ ಆರೋಗ್ಯ ಪ್ರಾಪ್ತಿಯಾಗಲಿ ಎಂಬುದೇ ನಮ್ಮ ಉದ್ದೇಶವಾಗಿದೆ. ಹೀಗಾಗಿ ಪ್ರತಿ ವರ್ಷದಂತೆ ಈ ಬಾರಿಯೂ ರಥಸಪ್ತಮಿ ದಿನವಾದ ಇಂದು ಯೋಗ ಯಜ್ಞ ಮಾಡಲಾಗಿದೆ ಎಂದು ಅವರು ಹೇಳಿದರು.
ಸಾಮಾಜಿಕ ಸಾಮರಸ್ಯ ಹಾಗೂ ಬಲಿಷ್ಠ ಭಾರತ ನಿರ್ಮಾಣಕ್ಕಾಗಿ ಪತಂಜಲಿ ಯೋಗ ಶಿಕ್ಷಣ ಸಮಿತಿಯು ಸದಾ ಮಿಡಿಯುತ್ತಿದ್ದು, ಕಳೆದ 38 ವರ್ಷದಿಂದ ರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಚಿತವಾಗಿ ಯೋಗ ಶಿಕ್ಷಣ ನೀಡುತ್ತಿದೆ. ಸಮಾಜದ ಎಲ್ಲ ವರ್ಗದವರು ಆರೋಗ್ಯ ಕಾಪಾಡಿಕೊಳ್ಳಲಿ ಎಂಬ ಸದುದ್ದೇಶದಿಂದ ಯೋಗ ಶಿಕ್ಷಣ ನೀಡಲಾಗುತ್ತಿದೆ ಎಂದರು.
ಸಾಮೂಹಿಕ ಸೂರ್ಯ ನಮಸ್ಕಾರದಲ್ಲಿ ನೂರಾರು ಮಂದಿ ನಾಗರಿಕರು ಪಾಲ್ಗೊಂಡಿದ್ದರು.