ತುರುವೇಕೆರೆ:
ತಾಲೂಕಿನಾದ್ಯಾಂತ ದೇವಸ್ಥಾನಗಳಲ್ಲಿ ಕಳ್ಳತನಗಳು ಪದೇ ಪದೇ ಮರುಕಳಿಸುತ್ತಿದ್ದರೂ ಪೋಲೀಸ್ ಇಲಾಖೆ ಯಾವುದೇ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳದೆ ಕೈಚಲ್ಲಿ ಕೂತಿದೆ ಎಂದು ಶಾಸಕ ಮಸಾಲೆಜಯರಾಮ್ ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕಿನ ದೇವಾಲಯಗಳಲ್ಲಿ ಸರಣಿಗಳ್ಳತನಗಳು ಮುಂದುವರಿದಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿ ಪತ್ರಿಕಾ ಹೇಳಿಕೆ ನೀಡಿದ ಅವರು, ತಾಲೂಕಿನಲ್ಲಿ ದಿನೇ ದಿನೇ ದೇವಾಲಯಗಳಲ್ಲಿ ಕಳ್ಳತನಗಳು ಹೆಚ್ಚಾಗುತ್ತಿದ್ದು ದೇವಾಲಯಗಳನ್ನು ಗುರಿಯಾಗಿಸಿಕೊಂಡಿರುವ ಕಳ್ಳರು ದೇವರ ಹುಂಡಿ ಹೊಡೆದು ಹಣ ದೋಚುವುದು ಹಾಗೂ ಬಂಗಾರದ ಒಡವೆಗಳು ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದಾರೆ. ಒಂದಿಲ್ಲೊಂದು ರೀತಿಯಲ್ಲಿ ತಾಲೂಕಿನ ಸಾರ್ವಜನಿಕರಲ್ಲಿ ಭಯ ಭೀತಿಯನ್ನು ಉಂಟುಮಾಡುವ ಹಂತಕ್ಕೆ ದೇವಾಲಯಗಳಲ್ಲಿ ಕಳ್ಳತನಗಳು ಎಗ್ಗಿಲ್ಲದೆ ಸಾಗಿದೆ ಒಂಟಿ ದೇವಾಲಯಗಳಿನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ, ಕಳ್ಳರೀಗ ಊರೊಳಗಿನ ದೇವಾಲಯಗಳಿಗೂ ಕನ್ನ ಹಾಕುವ ಹಂತಕ್ಕೆ ತಲುಪಿದ್ದಾರೆ ಯಾವುದೊ ಒಂದು ಗ್ಯಾಂಗ್ ಸರಣಿಗಳ್ಳತನಕ್ಕೆ ಇಳಿದಿರುವ ರೀತಿಯಲ್ಲಿ ದೇವಾಲಯಗಳಲ್ಲಿ ಕಳ್ಳತನ ನಡೆಯುತ್ತಿದೆ. ಕಳೆದವಾರವಷ್ಟೇ ದಂಡಿನಶಿವರ ಪೋಲೀಸ್ ಠಾಣೆಗೆ ಕೂಗಳತೆ ದೂರದಲ್ಲಿರುವ ಹೊನ್ನಾದೇವಿ ದೇವಾಲಯದ ಬೀಗ ಹೊಡೆದು ಲಕ್ಷಾಂತರ ರೂಪಾಯಿಗಳ ಒಡವೆ ದೋಚಿದ್ದಾರೆ, ಅಲ್ಲದೆ ಈಚೆಗೆ ದುಂಡಾ ಗ್ರಾಮದ ಬೊಮ್ಮಲಿಂಗೇಶ್ವರ ದೇವಾಲಯದಲ್ಲಿ ಕಳ್ಳತನಕ್ಕೆ ಮುಂದಾಗಿರುವುದು ಹಾಗೂ ಸಂಪಿಗೆ, ದಬ್ಬೇಗಟ್ಟ, ಮಾಯಸಂದ್ರ ಭಾಗಗಳ ದೇವಾಲಯಗಳಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದ್ದರೂ ಪೋಲೀಸ್ ಇಲಾಖೆ ಮುಂಜಾಗ್ರತಾ ಕ್ರಮ ವಹಿಸುವಲ್ಲಿ ವಿಫಲವಾಗಿದೆ.
ರಾತ್ರಿಪಾಳಿಯ ಭೀಟ್ ವ್ಯವಸ್ಥೆ ಸಂಪೂರ್ಣ ವಿಫಲವಾಗಿದ್ದು ನಾಮಕಾವಸ್ಥೆ ಕಾಗದಗಳಲ್ಲಿ ಮಾತ್ರ ಬೀಟ್ ವ್ಯವಸ್ಥೆ ಕಾಣಬಹುದಾಗಿದ್ದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು ಸೂಕ್ತರೀತಿಯಲ್ಲಿ ಬೀಟ್ ವ್ಯವಸ್ಥೆ ಸರಿಪಡಿಸಬೇಕೆಂದು ಆಗ್ರಹಿಸಿದರಲ್ಲದೆ, ದೇವಾಲಯಗಳ ಆಡಳಿತ ಮಂಡಳಿ ಸೂಕ್ತ ಕಾನೂನು ರೀತಿಯ ಕ್ರಮದ ಮೂಲಕ ದೇವಾಲಯದಲ್ಲಿರುವ ನಗನಾಣ್ಯ ಹಾಗೂ ಬೆಲೆಬಾಳುವ ಆಭರಣಗಳನ್ನು ಬ್ಯಾಂಕಿನಲ್ಲಿಡುವ ಕ್ರಮಕ್ಕೆ ಮುಂದಾಗಿ ಎಂದು ಸಲಹೆ ನೀಡಿದರು.