ತುಮಕೂರು:
ರಾಜ್ಯದಲ್ಲಿ ಅತಿವೃಷ್ಟಿಯಿಂದ ಹಾನಿಗೆ ಒಳಗಾಗಿರುವ ಪ್ರದೇಶಗಳಲ್ಲಿ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳುತ್ತಿರುವ ಮಧ್ಯೆಯೂ ರೈತರ ಹೊಲಕ್ಕೆ ನೀರಾವರಿ ಸೌಲಭ್ಯ ಒದಗಿಸಬೇಕೆಂಬುದು ನನ್ನ ಮೊದಲ ಆದ್ಯತೆಯಾಗಿರುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ತಿಳಿಸಿದರು.
ಧಾರ್ಮಿಕ ದತ್ತಿ ಇಲಾಖೆ, ಲೋಕೋಪಯೋಗಿ ಇಲಾಖೆ, ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಕ್ಷೇತ್ರ ಹಾಗೂ ಜಿಲ್ಲಾಡಳಿತ ಸಹಯೋಗದಲ್ಲಿ ಕುಣಿಗಲ್ ತಾಲ್ಲೂಕಿನ ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ ಕ್ಷೇತ್ರದಲ್ಲಿನ ಅಭಿವೃದ್ಧಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ದಿವಂಗತ ಮೈತ್ರಾದೇವಿ ಅವರ ಹೆಸರಿನಲ್ಲಿ ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿ ಪ್ರಾರಂಭ ಮಾಡಲು ಸೂಚಿಸಿದ್ದು, ನನ್ನ ಕುಟುಂಬ ಸದಸ್ಯರ ಆಪೇಕ್ಷೆಯಂತೆ ನನ್ನ ಸ್ವಂತ ಹಣದಿಂದ ಸಮುದಾಯ ಭವನ ನಿರ್ಮಾಣ ಮಾಡಲು ಸೂಚಿಸಿದ್ದೇನೆ ಎಂದು ಅವರು ತಿಳಿಸಿದರು.
ನೀರಾವರಿ ಯೋಜನೆಗಳಿಂದ ಸೌಲಭ್ಯ ಒದಗಿಸಿ, ರೈತ ಉತ್ತಮ ಬೆಳೆ ಬೆಳೆದು, ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಗಬೇಕು. ರೈತರು ನೆಮ್ಮದಿಯಿಂದ ಜೀವನ ನಡೆಸಬೇಕು ಎಂಬುದು ನಮ್ಮೆಲ್ಲರ ಸಂಕಲ್ಪವಾಗಿದೆ. ರಾಜ್ಯದಲ್ಲಿರುವ ಜಲಾಶಯಗಳು ತುಂಬಿ ಹರಿಯುತ್ತಿವೆ. ಆ ನೀರನ್ನು ಎಲ್ಲಾ ಭಾಗದ ಕೆರೆ-ಕಟ್ಟೆಗಳಿಗೆ ತುಂಬಿಸುವ ಕೆಲಸಕ್ಕೆ ಮೊದಲ ಆದ್ಯತೆ ನೀಡಿ, ರೈತ ಸಮುದಾಯಕ್ಕೆ ಅನುಕೂಲ ಮಾಡಿಕೊಡುತ್ತೇನೆ ಎಂದು ಅವರು ತಿಳಿಸಿದರು.
ಸುಮಾರು 1100 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಮೂರು ಕ್ಯೂಸೆಕ್ ನೀರು ಹರಿಯುವ ಚಾನೆಲ್ ಅಗಲೀಕರಣ ಆಗುತ್ತಿದೆ. ಹಾಲಿಯಿರುವ ತುಮಕೂರಿನಿಂದ ಕುಣಿಗಲ್ ಮಾರ್ಗವಾಗಿ ನೀರು ಹರಿಯುವ ಚಾನೆಲ್ ಆಧುನಿಕರಣ ಮಾಡುವ ಕೆಲಸ ನಡೆಯುತ್ತಿದ್ದು, ಸುಮಾರು 2400 ಕ್ಯೂಸೆಕ್ ನೀರು ಹರಿಯಲು ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅವರು ಹೇಳಿದರು.
ಅತಿವೃಷ್ಟಿಯಿಂದ ಸುಮಾರು 2 ಲಕ್ಷ ಮನೆಗಳು ನೆಲಸಮವಾಗಿವೆ. 7 ಲಕ್ಷ ಹೆಕ್ಟೇರ್ ಭೂಮಿ ಸಂಪೂರ್ಣ ನಾಶವಾಗಿ ರೈತರು ಬೀದಿಯಲ್ಲಿರುವುದು ದುರಾದೃಷ್ಟಕರ ಸಂಗತಿ. ಸದ್ಯಕ್ಕೆ ನಿರಾಶ್ರಿತ ಜನರಿಗೆ ವಸತಿ ಸೌಲಭ್ಯ ಮತ್ತು ರೈತರ ಬೆಳೆಗೆ ಪರಿಹಾರ ಕಲ್ಪಿಸಲು ಒತ್ತು ನೀಡಲಾಗುತ್ತಿದೆ. ಹಣಕಾಸಿನ ಸಂಪನ್ಮೂಲತೆಯನ್ನು ನೋಡಿಕೊಂಡು ರಾಜ್ಯದ ಎಲ್ಲಾ ನೀರಾವರಿ ಯೋಜನೆಗೆ ಹಣ ಬಿಡುಗಡೆ ಮಾಡಲಾಗುವುದು. ಸ್ಥಗಿತಗೊಂಡಿರುವ ಕಾಮಗಾರಿಗಳನ್ನು ಮರು ಪ್ರಾರಂಭ ಮಾಡಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
ಹಣಕಾಸಿನ ಇಲಾಖೆಯವರ ಜೊತೆ ಸಮಾಲೋಚನೆ ಮಾಡಿದ್ದು, ರಾಜ್ಯದ ಹಣಕಾಸಿನ ಸ್ಥಿತಿಗತಿ ತಿಳಿದುಕೊಂಡು ಏನೇನು ಸಾಧ್ಯವೋ ಅದನ್ನು ಪ್ರಾಮಾಣಿಕವಾಗಿ ಮಾಡುವ ಪ್ರಯತ್ನ ಮಾಡುತ್ತೇನೆ. 2020ರ ಆಯವ್ಯಯದಲ್ಲಿ ಸಿದ್ಧಲಿಂಗೇಶ್ವರ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡುತ್ತೇನೆ ಎಂದು ಅವರು ತಿಳಿಸಿದರು.
ಸಂಸದ ಜಿ.ಎಸ್ ಬಸವರಾಜು ಮಾತನಾಡಿ ಸಿದ್ಧಲಿಂಗೇಶ್ವರ 15ನೇ ಶತಮಾನದಲ್ಲಿ ಧರ್ಮಪ್ರಚಾರ ಮಾಡಿದ ಮಹಾಯೋಗಿ, ಈ ಕ್ಷೇತ್ರ ತುಮಕೂರಿಗೆ ವರದಾನವಾಗಿದೆ. ಈ ಕ್ಷೇತ್ರವನ್ನು ಬಿ.ಎಸ್ ಯಡಿಯೂರಪ್ಪ ಅವರು ಪವಿತ್ರಾ ಯಾತ್ರಾ ಸ್ಥಳವಾಗಿ ಅಭಿವೃದ್ಧಿ ಪಡಿಸಿದ್ದಾರೆ.
ಪೋಲಾಗುತ್ತಿರುವ 300-400 ಟಿಎಂಸಿ ನೀರನ್ನು ಹಳೆ ಮೈಸೂರು ಮತ್ತು ಉತ್ತರ ಕರ್ನಾಟಕ ಭಾಗಕ್ಕೆ ಅನುಕೂಲ ಮಾಡಿಕೊಟ್ಟರೆ ರೈತರ ಹೊಲಗಳಿಗೆ ಬಳಕೆ ಮಾಡಲು ಸಾರ್ಥಕವಾಗುತ್ತದೆ ಇದಕ್ಕಾಗಿ ಇವರು ಸಂಕಲ್ಪ ಮಾಡಬೇಕು. ತೆಲಂಗಾಣ ರಾಜ್ಯದಲ್ಲಿ ನೂತನ ತಂತ್ರಜ್ಞಾನ ಬಳಸಿ 98ಸಾವಿರ ಕೋಟಿ ರೂ. ವೆಚ್ಚದಲ್ಲಿ ನೀರನ್ನು ಸದ್ಬಳಕೆ ಮಾಡುವ ಯೋಜನೆ ರೂಪಿಸಿದ್ದಾರೆ. ಅದೇ ರೀತಿಯಲ್ಲಿ ಸಮುದ್ರ ಸೇರುತ್ತಿರುವ ನೀರನ್ನು ಬಳಸಿಕೊಳ್ಳಲು ಯೋಜನೆ ರೂಪಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಶ್ರೀ.ಮ.ನಿ ಜಗದ್ಗುರು ಡಾ|| ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಬಾಳೆಹೊನ್ನೂರು ಖಾಸಾ ಶಾಖಾ ಮಠದ ಶ್ರೀ ಶ್ರೀ ಶ್ರೀ ರೇಣುಕಾಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಸಿದ್ಧಗಂಗಾ ಮಠದ ಅಧ್ಯಕ್ಷ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು, ಶಾಸಕರಾದ ಡಾ|| ಹೆಚ್.ಡಿ ರಂಗನಾಥ್, ಜ್ಯೋತಿಗಣೇಶ್, ಜಯರಾಮ್, ಮಾಜಿ ಸಚಿವ ಸೊಗಡು ಶಿವಣ್ಣ, ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಹರೀಶ್ ನಾಯಕ್, ಲೋಕೋಪಯೋಗಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಗುರುಪ್ರಸಾದ, ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಸಿ.ಮೃತ್ಯುಂಜಯಸ್ವಾಮಿ, ಜಿಲ್ಲಾಧಿಕಾರಿ ಡಾ|| ರಾಕೇಶ್ಕುಮಾರ್, ಸಿಇಓ ಶುಭಾ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೋನವಂಶಿಕೃಷ್ಣ, ಉಪವಿಭಾಗಾಧಿಕಾರಿ ಶಿವಕುಮಾರ್, ಶ್ರೀ ಸಿದ್ಧಲಿಂಗೇಶ್ವರಸ್ವಾಮಿ ಕ್ಷೇತ್ರದ ವ್ಯವಸ್ಥಾಪನಾ ಸಮತಿ ಅಧ್ಯಕ್ಷೆ ಶ್ರೀದೇವಿ ಎಸ್.ಶೆಟ್ಟರ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಹಾಜರಿದ್ದರು.