ತುಮಕೂರು
ರಾಜ್ಯದಲ್ಲಿ 2013 ರಿಂದ 2018ರವರಗೆ ಯಾವುದೇ ಕಳಂಕವಿಲ್ಲದೆ, ಎಲ್ಲಾ ವರ್ಗದ ಜನರಿಗೂ ಯೋಜನೆಗಳನ್ನು ನೀಡಿ, ಸರಕಾರದ ಸವಲತ್ತುಗಳು ದೊರೆಯುವಂತೆ ಮಾಡಿದ ಸಿದ್ದರಾಮಯ್ಯ ಅವರನ್ನು ಟಿಪ್ಪುವನ್ನು ಕೊಂದ ಹಾಗೆ ಕೊಲ್ಲಬೇಕು ಎಂಬ ಹೇಳಿಕೆ ನೀಡಿರುವ ಸಚಿವ ಡಾ.ಆಶ್ವಥನಾರಾಯಣ ಅವರನ್ನು ಬಂಧಿಸದೆ, ಸಚಿವ ಸಂಪುಟದಿಂದ ವಜಾ ಮಾಡದೇ ಇರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ ಎಂದು ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಪುಟ್ಟಸ್ವಾಮಿಗೌಡ ತಿಳಿಸಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ತುಮಕೂರು ನಗರ ಮತ್ತು ಗ್ರಾಮಾಂತರ ವಿಧಾನಸಭಾ ಕ್ಷೇತ್ರಗಳ ಕಾರ್ಮಿಕ ಘಟಕದ ಪದಾಧಿಕಾರಿಗಳು ಮತ್ತು ಮುಖಂಡರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು,ರಾಜ್ಯಪಾಲರು ನಿಜವಾಗಿಯೂ ಸಂವಿಧಾನದತ್ತವಾಗಿ ನಡೆದುಕೊಂಡಿದ್ದರೆ,ಅವರನ್ನು ಮಂತ್ರಿ ಸ್ಥಾನದಿಂದ ವಜಾ ಮಾಡಬೇಕಾಗಿತ್ತು.ಆದರೆ ದುರ್ದೈವ,ಇಂದಿಗೂ ಅವರು ಅಧಿಕಾರದಲ್ಲಿ ಮುಂದುವರೆದಿದ್ದಾರೆ ಎಂದರು.
ಕೇಂದ್ರ ಸರಕಾರದ ಕಳೆದ 9 ವರ್ಷಗಳ ಆಡಳಿತದಲ್ಲಿ ರೈತರು,ಕಾರ್ಮಿಕರು,ಬಡವರು ಭ್ರಮ ನಿರಶನಗೊಂಡಿದ್ದಾರೆ.ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಕಾರ್ಮಿಕರ ಪರವಾಗಿ ತಂದಿದ್ದ 44 ಕಾಯ್ದೆಗಳನ್ನು,4 ಸಂಹಿತೆಗಳಾಗಿ ಬದಲಾಯಿಸಿ, ಉದ್ದಿಮೆದಾರರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಇಂದಿನ ಪ್ರಧಾನಿ ನರೇಂದ್ರಮೋದಿ.ಜಿ.ಎಸ್.ಟಿ,ನೋಟು ಅಮಾನೀಕ ರಣದ ಫಲವಾಗಿ ದೇಶದಲ್ಲಿ 14 ಕೋಟಿಯಷ್ಟು ಉದ್ಯೋಗ ನಷ್ಟವಾಗಿದ್ದು,18 ಲಕ್ಷ ಸಣ್ಣ ಸಣ್ಣ ಉದ್ದಿಮೆಗಳು ಬಾಗಿಲು ಹಾಕಿವೆ.ಇದರ ಫಲವಾಗಿ ನಿರುದ್ಯೋಗ ಹೆಚ್ಚಾಗಿ, ಜನರು ಬದುಕದಂತಹ ಸ್ಥಿತಿ ನಿರ್ಮಾಣವಾಗಿದೆ.ಅಗತ್ಯ ವಸ್ತುಗಳ ಬೆಲೆಗಳ ಹೆಚ್ಚಳದಿಂದ ಜನರು ತತ್ತರಿಸಿ ಹೋಗಿದ್ದಾರೆ.ಆದರೆ ಸರಕಾರ ಮಾತ್ರ ಜನರ ಹೆಸರಿನಲ್ಲಿ 100 ಲಕ್ಷ ಕೋಟಿ ಸಾಲ ಮಾಡಿ,ಜನರನ್ನು ಸಾಲದ ಶೂಲಕ್ಕೆ ತಳ್ಳಿದೆ. ಇದರಿಂದ ಜನರು ಹೊರಬರಬೇಕಾದರೆ ಕಾರ್ಮಿಕರು, ರೈತರು, ದಲಿತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು ಅಮಿಷಗಳಿಗೆ ಬಲಿಯಾಗದೆ, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು.ಈ ನಿಟ್ಟಿನಲ್ಲಿ ಶೀಘ್ರದಲ್ಲಿಯೇ ಕೆಪಿಸಿಸಿ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಕಾಂಗ್ರೆಸ್ನ ಕಾರ್ಮಿಕ ಬೃಹತ್ ಸಮಾವೇಶ ನಡೆಸಲಾಗುವುದು ಎಂದು ಪುಟ್ಟಸ್ವಾಮಿಗೌಡ ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಮಾತನಾಡಿ,ವೇದೋಪನಿಷತ್ ಕಾಲದಿಂದಲೂ ಶೋಷಣೆಗೆ ಒಳಗಾಗಿರುವ ಸಮುದಾಯಗಳೆಂದರೆ ಕಾರ್ಮಿಕರು,ನಮ್ಮ ಬೆವರಿನ ಶ್ರಮದಲ್ಲಿ ದೊಡ್ಡ ಉದ್ದಿಮೆಗಳನ್ನು ಸ್ಥಾಪಿಸಿ,ಶೋಷಣೆ ಮಾಡುತಿದ್ದಾರೆ.ಇಂತಹವರಿಗೆ ಬುದ್ದಿ ಕಲಿಸಬೇಕೆಂದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು.ಕಾರ್ಮಿಕರಿಲ್ಲದೆ ಯಾವುದೇ ಅಭಿವೃದ್ದಿ ಸಾಧ್ಯವಿಲ್ಲ.ಇದನ್ನು ಅರ್ಥ ಮಾಡಿಕೊಂಡು, ಪ್ರತಿಯೊಬ್ಬರು ತಮ್ಮ ವಿರೋಧಿಯಾಗಿರುವ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ವಿರುದ್ದ ಮತ ಚಲಾಯಿಸಿ, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದರೆ ಹೆಚ್ಚಿನ ಅನುಕೂಲಗಳನ್ನು ಪಡೆಯಬಹುದೆಂದರು.
ಕಾರ್ಯಕ್ರಮದಲ್ಲಿ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಗಳಾದ ಅತೀಕ್ ಅಹಮದ್, ಇಕ್ಬಾಲ್ ಅಹಮದ್, ಹೆಚ್.ಸಿ.ಹನುಮಂತಯ್ಯ,ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಟಿಕೇಟ್ ಆಕಾಂಕ್ಷಿಗಳಾದ ಸೂರ್ಯ ಮುಕುಂದರಾಜ್,ಶ್ರೀನಿವಾಸ್,ಕೆಪಿಸಿಸಿಯ ತುಮಕೂರು ನಗರ ಉಸ್ತುವಾರಿ ಕೇಶವಮೂರ್ತಿ ಅವರುಗಳು ಸಭೆಯನ್ನು ಕುರಿತು ಮಾತನಾಡಿದರು. ವೇದಿಕೆಯಲ್ಲಿ ಕೆಪಿಸಿಸಿ ಕಾರ್ಮಿಕ ಘಟಕದ ಕಾರ್ಯದರ್ಶಿಗಳಾದ ಶ್ರೀಕಾಂತ್,ರಾಜಣ್ಣ ಕಾರ್ಯದರ್ಶಿ,ಪ್ರಧಾನ ಕಾರ್ಯದರ್ಶಿಗಳಾದ ಕೆ.ಜಿ.ವೆಂಕಟೇಶ್,ಸೈಯದ್ ದಾದಾಪೀರ್,ಆನಂದ್,ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ್, ತುಮಕೂರು ಜಿಲ್ಲಾಧ್ಯಕ್ಷ ಅಬ್ದುಲ್ ರಹೀಂ,ಉಪಾಧ್ಯಕ್ಷ ಮಂಜೂರು ಪಾಷ್, ಭಾಗ್ಯ, ಭವ್ಯ, ಲಕ್ಷ್ಮಿದೇವಮ್ಮ, ಹನುಮಂತು,ನಯಾಜ್, ಜಬಿವುಲ್ಲಾ ಮತ್ತಿತರರು ಉಪಸ್ಥಿತರಿದ್ದರು.